ಹಂಟ್, ಜೇಮ್ಸ್ ಹೆನ್ರಿ ಲೀ
	1784-1859. ಇಂಗ್ಲಿಷ್ ಪ್ರಬಂಧಕಾರ ಮತ್ತು ಕವಿ. ಪತ್ರಿಕೋದ್ಯಮಿಯಾಗಿಯೇ ಜೀವನ ನಿರ್ವಹಿಸಿದ ಈತ ಎಕ್ಸಾಮಿನರ್ ಪತ್ರಿಕೆಯನ್ನು ತನ್ನ ಅಣ್ಣನೊಡನೆ ನಡೆಸುತ್ತಿದ್ದಾಗ ಒಮ್ಮೆ ಪ್ರಿನ್ಸ್ ರೀಜೆಂಟ್ ಅನ್ನು ಹಾಸ್ಯಮಾಡಿ ಬರೆದ ಲೇಖನದಿಂದ ಐನೂರು ಪೌಂಡ್‍ಗಳ ಜುಲ್ಮಾನೆ, ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ. ಬೈರನ್, ಮೂರ್ ಮತ್ತು ಲ್ಯಾಂಬ್ ಇವನ ಸ್ನೇಹಿತರಾಗಿದ್ದರು.

	ಇವನು ಕವನಗಳನ್ನು ಬರೆದಿದ್ದರೂ ಪ್ರಬಂಧಗಳು ಇವನಿಗೆ ಅಪಾರ ಹೆಸರು ತಂದುಕೊಟ್ಟವು. ಮೆನ್, ವಿಮೆನ್ ಅಂಡ್ ಬುಕ್ಸ್(1847), ದಿ ಓಲ್ಡ್ ಕೋರ್ಟ್ ಸಬರ್ಬ್(1855)- ಇವು ಮುಖ್ಯ ಪ್ರಬಂಧ ಸಂಗ್ರಹಗಳು. ಈ ಪ್ರಬಂಧಗಳಲ್ಲಿ ಉಲ್ಲಾಸವಿದೆ. ಇವನ ಹಾಸ್ಯ ಅಷ್ಟೇನೂ ಮೆಚ್ಚುಗೆಗೆ ಪಾತ್ರವಾದುದಲ್ಲವಾದರೂ ಇವನ ಪ್ರಬಂಧಗಳಲ್ಲಿ ಆತ್ಮೀಯತೆ ಮತ್ತು ಸುಂದರಗದ್ಯವನ್ನು ಕಾಣಬಹುದಾಗಿದೆ. ಆಟೋಬಯಾಗ್ರಫಿ(1850) ಎಂಬುದು ಇವನ ಆತ್ಮಕಥೆ. ಇವನ ಸಾಹಿತ್ಯದ ಪ್ರಭಾವವನ್ನು ಚಾಲ್ರ್ಸ್ ಡಿಕನ್ಸ್‍ನ ಪ್ರಾರಂಭದ ಕೃತಿಗಳಲ್ಲಿ ಗುರುತಿಸಬಹುದಾಗಿದೆ.					
		(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ